ವಿದ್ಯೆಯಿಂದ ಉತ್ತಮ ಭವಿಷ್ಯ ನಿರ್ಮಾಣ

ಶಿವಮೊಗ್ಗ: ಶಿಕ್ಷಣ ಪಡೆಯುವುದರಿಂದ ಉತ್ತಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿದ್ದು, ವಿದ್ಯಾರ್ಥಿಗಳು ಅಧ್ಯಯನದಲ್ಲಿ ಒಳ್ಳೆಯ ಸಾಧನೆ ಮಾಡಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ವಿಷ್ಣುಮೂರ್ತಿ ಅಭಿಪ್ರಾಯಪಟ್ಟರು.
ನಗರದ ಎಟಿಎನ್‌ಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಆಚಾರ್ಯ ಅದ್ವಿತೀಯ ಕಾರ್ಯಕ್ರಮ ಸಮಾರೋಪದಲ್ಲಿ ಮಾತನಾಡಿ, ಸ್ಪರ್ಧೆಗಳಲ್ಲಿ ಗೆಲುವು ಸೋಲು ಸಾಮಾನ್ಯ. ಬಹುಮಾನ ದೊರೆಯಲಿಲ್ಲ ಎಂದು ಬೇಸರ ಮಾಡಿಕೊಳ್ಳಬಾರದು. ಕೌಶಲ್ಯ ವೃದ್ಧಿಸುವ ಜತೆಯಲ್ಲಿ ಮುಂದಿನ ಹಂತಗಳಲ್ಲಿ ಸಾಧನೆ ಮಾಡಲು ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ತಿಳಿಸಿದರು.
ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ. ಎಸ್.ಎಂ.ಗೋಪಿನಾಥ್ ಮಾತನಾಡಿ, ನಿರಾಸಕ್ತಿಯಿಂದ ಸ್ನೇಹ, ಸಬಂಧ, ಭಾವನೆಗಳು ಕಡಿಮೆಯಾಗುತ್ತದೆ. ದೇಶ ಸುತ್ತಿ ನೋಡು ಕೋಶ ನೋಡು ಎಂಬಂತೆ ಪ್ರಾಪಂಚಿಕ ಜ್ಞಾನ ಕೂಡ ಮುಖ್ಯ ಎಂದು ಹೇಳಿದರು.
ಉದ್ಯಮಿ ನಿವೇದನ್ ನೆಂಪೆ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಏನಾಗಬೇಕು ಎನ್ನುವ ಸ್ಪಷ್ಟ ಗುರಿ ಹೊಂದಿರಬೇಕು. ಹಂತ ಹಂತವಾಗಿ ಪ್ರಯತ್ನಿಸುವುದರಿಂದ ಯಶಸ್ಸು ಗಳಿಸಲು ಸಾಧ್ಯವಿದೆ. ಪರಿಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ ಎಂದು ತಿಳಿಸಿದರು.
ವೈದ್ಯ ರಾಹುಲ್ ದೇವರಾಜ್ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕಾರಯುತ ಜೀವನಶೈಲಿ ರೂಢಿಸಿಕೊಳ್ಳಬೇಕು. ಪಾಲಕರು, ಹಿರಿಯರು ಹಾಗೂ ದೇಶದ ಗೌರವ ಕಾಪಾಡುವಂತೆ ಬದುಕು ಕಟ್ಟಿಕೊಳ್ಳಬೇಕು. ನಿಮ್ಮ ಆಯ್ಕೆ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಟಿ.ಆರ್.ಅಶ್ವತ್ಥ್ ನಾರಾಯಣ ಶೆಟ್ಟಿ ಮಾತನಾಡಿ, ಮೊಬೈಲ್ ಸಾಧನ ಯುವಜನರಿಗೆ ವಾರವಾಗಬೇಕಾಗಿತ್ತು. ಆದರೆ ಯುವಜನತೆಗೆ ಶಾಪವಾಗುವ ರೀತಿ ಪರಿಣಿಮಿಸಿದೆ. ದೇಶದ ಅಭಿವೃದ್ಧಿಯಲ್ಲಿ ಪಾತ್ರ ವಹಿಸುವ ಬಗ್ಗೆ ಆಲೋಚಿಸಬೇಕು ಎಂದು ಹೇಳಿದರು.
ಎಟಿಎನ್‌ಸಿಸಿ ಪ್ರಾಚಾರ್ಯೆ ಪ್ರೊ. ಪಿ.ಆರ್.ಮಮತಾ ಮಾತನಾಡಿದರು. ರಾಜ್ಯದ 20ಕ್ಕಿಂತ ಹೆಚ್ಚಿನ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಬಹುಮಾನ ವಿಜೇತರಾದರು.
ಎಟಿಎನ್‌ಸಿ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಸ್.ಎಸ್.ವಾಗೀಶ್, ಉದ್ಯಮಿ ಜಿ.ವಿಜಯಕುಮಾರ್, ಪ್ರೊ. ಎಸ್.ಜಗದೀಶ್, ಪ್ರೊ. ಕೆ.ಎಂ.ನಾಗರಾಜು, ಪ್ರೊ. ಎನ್.ಮಂಜುನಾಥ್, ಪ್ರೊ. ಜಿ.ರವಿಕುಮಾರ್, ಪ್ರೊ. ಕೆ.ವಿ.ಗಿರಿಧರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *