ಚಂದನಕೆರೆ ಗ್ರಾಮದಲ್ಲಿ ಗೋಮಾಳ ಭೂಮಿ ಗುರುತಿಸಲು ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಭದ್ರಾವತಿ: ತಾಲ್ಲೂಕಿನ ಚಂದನಕೆರೆ ಗ್ರಾಮದ ಸರ್ವೇ ನಂಬರ್ 12ರಲ್ಲಿನ ಗೋಮಾಳ ಭೂಮಿಯನ್ನು ಗುರುತಿಸಿ ಗ್ರಾಮಕ್ಕೆ ಮೀಸಲಿರಿಸಬೇಕು ಎಂದು ಒತ್ತಾಯಿಸಿ ಶ್ರೀ ರಂಗನಾಥ ಸ್ವಾಮಿ ಗೋಮಾಳ ಹಿತರಕ್ಷಣಾ ಸಮಿತಿ ವತಿಯಿಂದ ಶುಕ್ರವಾರ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ
ನಡೆಸಿದರು.

ಗ್ರಾಮದ ಸರ್ವೇ ನಂ.12ರಲ್ಲಿ ಸುಮಾರು 413 ಎಕರೆ ವಿಸ್ತೀರ್ಣದ ಭೂಮಿಯಿದ್ದು, ಭೂಮಿ ಯಲ್ಲಿ ಅರಣ್ಯವೂ ಸೇರಿದಂತೆ ಗೋಮಾಳ ಕಂದಾಯ ಭೂಯಿಯು ಕೂಡಾ ಇರುತ್ತದೆ. ಈಗಾಗಲೇ ರೈತರಿಗೆ ಸರ್ಕಾರ ಮಂಜೂರಾತಿ ಮಾಡಿರುವ ಭೂಮಿಯನ್ನು ಹೊರತುಪಡಿಸಿ ಉಳಿದ ಗೋಮಾಳ ಕಂದಾಯ ಭೂಮಿ ಯಲ್ಲೂ ಕೂಡಾ ಕಾಡು ಜಾತಿಯ ಮರಗಿಡ ಗಳು ಬೆಳೆದಿರುತ್ತವೆ. ಗುಡ್ಡಗಾಡಿನಿಂದ ಕೂಡಿರುವ ಪ್ರದೇಶವಾಗಿರುವುದರಿಂದ ಆ
ಸ್ಥಳಕ್ಕೆ ಆಗಮಿಸಿ ಸ್ಥಳಪರಿಶೀಲನೆ ನಡೆಸುವ ಮೂಲಕ ಗೋಮಾಳ ಜಾಗವನ್ನು ಗುರುತಿಸುವಂತೆ ಆಗ್ರಹಿಸಿದರು.

ಚಂದನಕೆರೆ ಗ್ರಾಮದಲ್ಲಿ ಸುಮಾರು 250 ಮನೆಗಳಿದ್ದು ಗ್ರಾಮದಲ್ಲಿರುವ ಎಲ್ಲಾ ರೈತರು ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿದ್ದೇವೆ.

ಸ.ನಂ.12ರ ಭೂಮಿಯು ನಮ್ಮ ಗ್ರಾಮದ ಕೂಗಳತೆಯ ದೂರದಲ್ಲಿಯೇ ಇದ್ದು, ಗ್ರಾಮದ ರೈತರ ದನ-ಕರು-ಎಮ್ಮೆ-ಕುರಿ- ಆಡು ಮುಂತಾದ ಸಾಕು ಪ್ರಾಣಿಗಳಿಗೆ ಭೂಮಿ ಬಿಟ್ಟು ಬೇರೆ ಯಾವುದೇ ಭೂಮಿಯಲ್ಲೂ ಮೇವು ಸಿಗುತ್ತಿರುವುದಿಲ್ಲ. ಇತ್ತೀಚೆಗೆ ಮಳೆ ಕಡಿಮೆಯಾಗಿ ದನಕರುಗಳಿಗೆ ಮೇವಿಗೆ ಸ.ನಂ.12ರ ಭೂಮಿಯನ್ನೇ ಮೇವಿಗಾಗಿ ನಾವೆಲ್ಲರೂ ಆಶ್ರಯಿಸಿರುತ್ತೇವೆ. ಆದ್ದರಿಂದ ಸ.ನಂ.12ರ ಭೂಮಿಯನ್ನು ಚಂದನಕೆರೆ ಗ್ರಾಮಕ್ಕೆ ಗೋಮಾಳವಾಗಿ ಮೀಸಲಾಗಿ ಕಾಯ್ದಿರಿಸಬೇಕೆಂದು ಒತ್ತಾಯಿಸಿದರು.

ಶ್ರೀರಂಗನಾಥ ಸ್ವಾಮಿ ಗೋಮಾಳ ಹಿತರಕ್ಷಣಾ ಸಮಿತಿಯ ಉಮೇಶಪ್ಪ, ಬಿ.ನರಸಪ್ಪ, ಹರೀಶ ಕೆ.ಆರ್., ರಘು, ರಂಗಸ್ವಾಮಿ, ನಾಗರಾಜು,ರಾಜಪ್ಪ ಹಾಗೂ ಚಂದನಕೆರೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಹಸೀಲ್ದಾರ್ ನಾಗರಾಜ್ ರವರಿಗೆ ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *