ಶಿವಮೊಗ್ಗ: ಇಲ್ಲಿಗೆ ಸಮೀಪದ ಸವಳಂಗದಲ್ಲಿ ಪುರಾತನ ಶಿಲಾ ಶಿಲ್ಪ ಪತ್ತೆಯಾಗಿದೆ ಎಂದು ಇತಿಹಾಸ ತಜ್ಞ ಡಾ.ಬಾಲಕೃಷ್ಣ ಹೆಗಡೆ ತಿಳಿಸಿದ್ದಾರೆ.
ಸವಳಂಗದ ಹೊರವಲಯದಲ್ಲಿರುವ ಹೊಸಕೆರೆಯಲ್ಲಿ ಈ ಅಪರೂಪದ ಶಿಲ್ಪ ಕಂಡುಬಂದಿದ್ದು ಶಿಲ್ಪದ ಕೆಲ ಲಕ್ಷಣಗಳನ್ನು ಗಮನಿಸಿದರೆ ಭೈರವ ಶಿಲ್ಪದಂತೆ ಕಂಡುಬಂದರೂ ಇನ್ನು ಕೆಲ ಲಕ್ಷಣಗಳನ್ನು ಗಮನಿಸಿದಾಗ ವೀರಭದ್ರ ಶಿಲ್ಪದಂತೆ ಭಾಸವಾಗುತ್ತದೆ ಎಂದು ಅವರು ಹೇಳುತ್ತಾರೆ.
ಮತ್ತೆ ಕೆಲ ಲಕ್ಷಣಗಳನ್ನು ಗಮನಿಸಿದರೆ ಕಾಳಿಯದ್ದಿರಬಹುದೇನೋ ಎಂದೆನಿಸುತ್ತದೆ ಎಂದು ಅವರು ಹೇಳಿದ್ದಾರೆ.
ಸುಮಾರು ವಿಜಯನಗರ ಕಾಲಕ್ಕೆ ಸೇರಿದ್ದ ಶಿಲ್ಪ ಇದಾಗಿದ್ದು ಕಪ್ಪು ಶಿಲೆಯಲ್ಲಿ ಇದನ್ನು ಖಂಡರಿಸಲಾಗಿದೆ. ಶಿಲ್ಪ ಚತುಭುಜಗಳನ್ನು ಹೊಂದಿದ್ದು, ಬಲಭಾಗದ ಮುಂಗೈಯಲ್ಲಿ ಖಡ್ಗವನ್ನು ಮೇಲ್ಮುಖವಾಗಿ ಭುಜದ ಮೇಲೆ ಇಟ್ಟುಕೊಂಡಿರುವ ರೀತಿಯಲ್ಲಿದೆ. ಬಲಭಾಗದ ಇನ್ನೊಂದು ಕೈಯಲ್ಲಿ ತ್ರಿಶೂಲವಿದೆ ಎಂದಿರುವ ಅವರು ಶಿಲ್ಪದ ಎಡಗೈಯೊಂದು ಭಗ್ನಗೊಂಡಿದೆ. ಇನ್ನೊಂದು ಕೈಯಲ್ಲಿ ಪಾಶವಿದೆ ಎಂದು ಅವರು ವಿವರಿಸಿದ್ದಾರೆ.
ಶಿರದ ಎಡ ಬಲ ಭಾಗದಲ್ಲಿ ಸೂರ್ಯ ಚಂದ್ರರ ಕೆತ್ತನೆ ಇದೆ. ಸಾಮಾನ್ಯವಾಗಿ ವೀರ ಗಲ್ಲುಗಳಲ್ಲಿ ಈ ತರಹದ ಕೆತ್ನೆಗಳನ್ನು ಕಾಣುತ್ತೇವೆ. ಆದರೆ ಇದು ವೀರಗಲ್ಲು ಆಗಲಿಕ್ಕಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಶಿಲ್ಪದಲ್ಲಿ ಎಲ್ಲಿಯೂ ಶಾಸನ ಕೆತ್ತನೆ ಕಂಡುಬಂದಂದಿಲ್ಲ. ಈ ಶಿಲ್ಪದ ಎಡ ಭಾಗದಲ್ಲಿ ಒಂದು ಚಿಕ್ಕ ಶಿಲ್ಪದ ಕೆತ್ತನೆ ಇದೆ. ವೀರಭದ್ರ ಶಿಲ್ಪವಾಗಿದ್ದರೆ ಇಕ್ಕೆಲೆಗಳಲ್ಲಿ ದಕ್ಷ-ಬ್ರಹ್ಮ ಶಿಲ್ಪಗಳು ಇರುತ್ತವೆ ಎಂದಿರುವ ಅವರು ಸದರಿ ಶಿಲ್ಪ ರುಂಢಮಾಲಾಧಾರಿಯಾಗಿದ್ದರೂ ಇದು ಕಾಳಿಯ ಶಿಲ್ಪ ಎಂದು ಹೇಳುವುದೂ ಕಷ್ಟ ಎಂಬ ಅಭಿಪ್ರಾಯ ನೀಡಿದ್ದಾರೆ.
ಈ ಶಿಲ್ಪ ಶಿವಗಣ ಶಿಲ್ಪವಾಗಿರಬಹುದು ಎಂದು ಹಿರಿಯ ಶಾಸನತಜ್ಞರಾದ ಡಾ.ಜಗದೀಶ ಅಗಸಿಬಾಗಿಲವರ್ ಅಭಿಪ್ರಾಯ ಪಡುತ್ತಾರೆ ಎಂದು ಡಾ.ಬಾಲಕೃಷ್ಣ ಹೆಗಡೆ ತಿಳಿಸಿದ್ದಾರೆ.
ಒಟ್ಟಿನಲ್ಲಿ ಶಿಲ್ಪಶಾಸ್ತ್ರದ ದೃಷ್ಟಿಯಿಂದ ಈ ಶಿಲ್ಪ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಇದರ ಕುರಿತು ಇನ್ನಷ್ಟು ಅಧ್ಯಯನದ ಅವಶ್ಯಕತೆ ಇದೆ. ಬಳಿಕವಷ್ಟೇ ಈ ಶಿಲ್ಪ ಏನಿರಬಹುದೆಂದು ನಿಖರವಾಗಿ ಹೇಳಬಹುದು ಎಂದು ಡಾ.ಹೆಗಡೆ ಹೇಳಿದ್ದಾರೆ.