ಯೋಗಾಭ್ಯಾಸದಿಂದ ಕಾಯಿಲೆಗಳು ದೂರ

ಶಿವಮೊಗ್ಗ: ಯೋಗ, ಧ್ಯಾನ ಹಾಗೂ ಪ್ರಾಣಾಯಾಮದಿಂದ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ನಮ್ಮ ದೇಹದಲ್ಲಿ ನಮಗೆ ಗೊತ್ತಿಲ್ಲದೇ ಇರುವ ಕಾಯಿಲೆಗಳು ಯೋಗಾಸನದಿಂದ ದೂರವಾಗುತ್ತವೆ ಎಂದು ಮಹಾನಗರ ಪಾಲಿಕೆ ಸದಸ್ಯೆ ಆರತಿ ಆಮ ಪ್ರಕಾಶ್ ಹೇಳಿದರು.
ರವೀಂದ್ರ ನಗರ ಸರಸ್ವತಿ ಮಂದಿರದಲ್ಲಿ ಶಿವಗಂಗಾ ಯೋಗ ಕೇಂದ್ರ ರಾಘವ ಶಾಖೆ ವತಿಯಿಂದ ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಯೋಗ ಅಭ್ಯಾಸದಿಂದ ದೇಹದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಸದಾ ಉತ್ಸಾಹ ಹಾಗೂ ಲವಲವಿಕೆಯಿಂದ ಇರಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಯೋಗದಿಂದ ನಮಗೆ ಸಕಾರಾತ್ಮಕ ಭಾವನೆ ಜತೆಗೆ ಒಳ್ಳೆಯ ನಿದ್ರೆ ಹಾಗೂ ಆಹಾರ ಸೇವನೆಗೆ ದಾರಿದೀಪವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಯೋಗವನ್ನು ಅಭ್ಯಾಸ ಮಾಡಬೇಕು. ಪ್ರಾತಃಕಾಲದಲ್ಲಿ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಮಾಡುವುದು ಆತ್ಮವಿಶ್ವಾಸ ವೃದ್ಧಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಪ್ರೇರಣ ಮಹಿಳಾ ಸಂಸ್ಥೆ ಅಧ್ಯಕ್ಷೆ ಪುಷ್ಪಲತಾ ಮೂರ್ತಿ ಮಾತನಾಡಿ, ಮಹಿಳೆಯರಿಗೆ ಯೋಗಾಸನದಿಂದ ತುಂಬಾ ಲಾಭಗಳಿವೆ. ಖಿನ್ನತೆ ದೂರವಾಗುವುದರ ಜತೆಗೆ ಸದಾ ಆರೋಗ್ಯದಿಂದ ಇರಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮಹಿಳೆಯರು ಸಹ ಯೋಗ ಮಾಡುವುದರಿಂದ ಸಾಕಷ್ಟು ದೇಹದಲ್ಲಿರುವ ಸಮಸ್ಯೆಗಳನ್ನು ಗುಣಪಡಿಸಿಕೊಳ್ಳಬಹುದು ಎಂದು ಹೇಳಿದರು.
ಮಂಜುಳಾ ರಾಯ್ಕರ್ ಮಾತನಾಡಿ, ನಾನು ಯೋಗದಿಂದ ಉತ್ತಮ ಆರೋಗ್ಯ ಸಂಪಾದನೆ ಮಾಡಿಕೊಂಡಿದ್ದೇನೆ. ಯೋಗದಿಂದ ಸಂಸ್ಕಾರದ ಜತೆಗೆ ಆಧ್ಯಾತ್ಮದ ಒಲವು ಸಹ ಸಿಗುತ್ತದೆ. ಮನಸ್ಸು ಸದಾ ಪ್ರಶಾಂತವಾಗಿ ಇರುತ್ತದೆ ಎಂದು ತಿಳಿಸಿದರು.
ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯ ಜಿ.ಎಸ್.ಓಂಕಾರ್, ಹರೀಶ್, ವಿಜಯ ಕೃಷ್ಣ, ಜಿ.ವಿಜಯಕುಮಾರ್, ನರ್ಸೋಜಿ ರಾವ್, ಶ್ರೀನಿವಾಸ್, ಗಾಯತ್ರಿ ರಮೇಶ್, ಸುಜಾತಾ ಮಧುಕರ್, ಶೋಭಾ. ಶಂಕರ್, ಬಿಂದು ವಿಜಯಕುಮಾರ್, ಮಹೇಶ್, ಶೈಲಜಾ ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *