ಶಿವಮೊಗ್ಗ: ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ 2021-2024 ಸಾಲಿನ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆಡಳಿತ ಮಂಡಳಿಯು ಅನೇಕ ಕನಸುಗಳನ್ನು ಕಂಡು ಯೋಜನೆಗಳನ್ನು ರೂಪಿಸಿ 90ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ ಎಂದು ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ನಿಕಟಪೂರ್ವ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ 40ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಸಂಘವು ವಜ್ರ ಮಹೋತ್ಸವದ ವರ್ಷದಲ್ಲಿ ಸಾಂಪ್ರದಾಯಿಕ ಕಾರ್ಯಕ್ರಮಗಳ ಜೊತೆಯಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಕೊಡಬೇಕು ಎಂಬ ಆಶಯದೊಂದಿಗೆ ಅಡ್ವಾನ್ಸ್ಡ್ ಸ್ಕಿಲ್ ಡೆವಲಪ್ಮೆಂಟ್ ಅಕಾಡೆಮಿ ಪ್ರಾರಂಭಿಸಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರತಿಭಾವಂತರು, ಕೈಗಾರಿಕೆಗಳಿಗೆ ಬೇಕಾದ ನಿರ್ದಿಷ್ಟ ಕೌಶಲ್ಯಗಳನ್ನು ಹೊಂದಿದ ಕೆಲಸಗಾರರನ್ನು ರೂಪಿಸುವುದರ ಜತೆಗೆ ಯುವಜನತೆಗೆ ಶಾಲಾ ಕಾಲೇಜುಗಳಲ್ಲಿ ಸಿಗದಂತಹ ವಿಶೇಷ ಕೌಶಲ್ಯಗಳನ್ನು ಕಲಿಸುವ ಉದ್ದೇಶವನ್ನು ಸ್ಕಿಲ್ ಅಕಾಡೆಮಿ ಹೊಂದಿದೆ ಎಂದರು.
ಎಕ್ಸ್ಪೋರ್ಟ್ ಫೆಸಿಲಿಟೇಶನ್ ಸೆಂಟರ್ ಮತ್ತು ಐಪಿ ಫೆಸಿಲಿಟೇಶನ್ ಸೆಂಟರ್ ಪ್ರಾರಂಭಿಸುವ ಮೂಲಕ ಉದ್ಯಮಗಳಿಗೆ ಅನುಕೂಲದ ಜೊತೆಗೆ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಮಹತ್ತರ ಯೋಜನೆಯನ್ನು ರೂಪಿಸಿ, ಇದಕ್ಕೆ ಬೇಕಾದ ಪತ್ರ ವ್ಯವಹಾರ ಮಾಡಲಾಗಿದೆ ಎಂದು ತಿಳಿಸಿದರು.
ಎಲ್ಲ ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ಸಂಘದ ಕಾರ್ಯದರ್ಶಿ ಹಾಗೂ ಎಲ್ಲ ನಿರ್ದೇಶಕರ ಅವಿರತ ಸಹಕಾರ, ಮಾಜಿ ಅಧ್ಯಕ್ಷರ ಸಲಹೆ ಸಹಕಾರ ಪ್ರಮುಖ ಪಾತ್ರ ವಹಿಸಿದೆ. ಸಂಘದ ಕಾರ್ಯಕ್ರಮಗಳನ್ನು ಜನತೆಗೆ ಮುಟ್ಟಿಸುವಲ್ಲಿ ಮಾಧ್ಯಮದವರ ಸಹಕಾರ ಅಪಾರ ಎಂದರು.
ಸAಘದ ನೂತನ ಅಧ್ಯಕ್ಷ ಬಿ.ಗೋಪಿನಾಥ್, ನಿಕಟಪೂರ್ವ ಕಾರ್ಯದರ್ಶಿ ವಸಂತ್ ಹೊಬಳಿದಾರ್, ನೂತನ ಉಪಾಧ್ಯಕ್ಷ ಜಿ.ವಿಜಯಕುಮಾರ್, ನಿಕಟಪೂರ್ವ ಖಜಾಂಚಿ ರಾಜು ಮತ್ತು ಇತರ ನಿರ್ದೇಶಕರು, ಮಾಜಿ ಅಧ್ಯಕ್ಷರಾದ ಡಿ.ಎಸ್.ಅರುಣ್, ವಸಂತ್ ಕುಮಾರ್, ಅಶ್ವಥ್ ನಾರಾಯಣ್ ಶೆಟ್ಟಿ, ಶಂಕರಪ್ಪ, ವಾಸುದೇವ್ ಹಾಗೂ ಸದಸ್ಯರು ಭಾಗವಹಿಸಿದ್ದರು.