ರೈಲ್ವೆ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮನವಿ

ಶಿವಮೊಗ್ಗ: ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅಗತ್ಯವಿರುವ ರೈಲ್ವೆ ಸೌಕರ್ಯಗಳನ್ನು ಒದಗಿಸುವಂತೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಅವರ ನಿವಾಸದಲ್ಲಿ ಸಮಾಲೋಚನೆ ನಡೆಸಿದ ನಂತರ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ಶಿವಮೊಗ್ಗ-ತುಮಕೂರು ಪ್ಯಾಸೆಂಜರ್ ರೈಲು ಸಂಚಾರವನ್ನು ಬೆಂಗಳೂರಿನವರೆಗೂ ವಿಸ್ತರಿಸಬೇಕು ಹಾಗೂ ಪುನಃ ವಾಪಸ್ ಬೆಂಗಳೂರು-ಶಿವಮೊಗ್ಗ ಪ್ಯಾಸೆಂಜರ್ ರೈಲು ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.

ಶಿವಮೊಗ್ಗ-ಬೆಂಗಳೂರು ಜನಶತಾಬ್ಧಿ ರೈಲು ಸಂಚಾರವನ್ನು ಬೆಳಗ್ಗೆ 5.45ಕ್ಕೆ ನಿಗದಿಪಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ಅನಗತ್ಯ ಸ್ಥಳಗಳಲ್ಲಿ ರೈಲು ಸಂಚಾರ ನಿಲ್ಲಿಸಬಾರದು. ಪ್ರಯಾಣಿಕರ ಅನುಕೂಲಕ್ಕಾಗಿ ಶಿವಮೊಗ್ಗ-ಯಶವಂತಪುರ ರೈಲು ಸಂಚಾರ ಮಧ್ಯಾಹ್ನ 3ಕ್ಕೆ ಆರಂಭಿಸಬೇಕು. ಯಶವಂತಪುರ-ಶಿವಮೊಗ್ಗ ರೈಲು ವಾರಕ್ಕೆ ಮೂರು ದಿನ ಬದಲಾಗಿ ಪ್ರತಿ ದಿನ ಸಂಚರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಚೆನ್ನೆವರೆಗೂ ಸಂಚಾರ ವಿಸ್ತರಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಶಿವಮೊಗ್ಗ-ರೇಣಿಗುಂಟ-ಚೆನ್ನೈ ರೈಲು ಸಂಚಾರ ಮೂರು ತಿಂಗಳ ಹಿಂದೆ ಸ್ಥಗಿತಗೊಂಡಿದ್ದು, ಪುನಃ ವಾರದಲ್ಲಿ ಎರಡು ಅಥವಾ ಮೂರು ಬಾರಿ ಸಂಚಾರ ಆರಂಭಿಸಬೇಕು. ತಿರುಪತಿ ಪ್ರಯಾಣಿಕರಿಗೂ ಅನುಕೂಲವಾಗಲಿದೆ. ಕುವೆಂಪು ಎಕ್ಸ್ಪ್ರೆಸ್ ರೈಲು ವೇಗ ಹೆಚ್ಚಿಸಲು ಕ್ರಮ ವಹಿಸಿ ಸಂಚಾರ ಸಮಯ ಕಡಿಮೆಗೊಳಿಸಬೇಕು. ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿ ವೇಗಗೊಳಿಸಬೇಕು ಎಂದು ಮನವಿ ಮಾಡಿದರು.

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಆಟೋ ಸಂಚಾರ ಸಮರ್ಪಕ ಆಗುವಂತೆ ಕ್ರಮ ವಹಿಸಬೇಕು. ರೈಲು ಆಗಮಿಸುವ ಸಂದರ್ಭದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳುವಂತೆ ರೈಲ್ವೆ ಪೊಲೀಸರಿಗೆ ಸೂಚಿಸಬೇಕು. ಪಾರ್ಕಿಂಗ್ ಜಾಗದಲ್ಲಿ ಸರಿಯಾದ ಶೆಲ್ಟರ್ ಇಲ್ಲ, ಬೆಳಕಿನ ವ್ಯವಸ್ಥೆ ಇಲ್ಲ. ಅಗತ್ಯವಿರುವ ಮೂಲಸೌಕರ್ಯ ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಿದರು.

ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ರೈಲ್ವೆ ಸಮಿತಿ ಅಧ್ಯಕ್ಷ ಎಸ್.ಎಸ್.ಉದಯಕುಮಾರ್, ಖಜಾಂಚಿ, ಆರ್.ಮನೋಹರ, ಮಾಜಿ ಅಧ್ಯಕ್ಷರಾದ ಮಹೇಂದ್ರಪ್ಪ, ಅಶ್ವತ್ಥನಾರಾಯಣ ಶೆಟ್ಟಿ, ನಿರ್ದೇಶಕರಾದ ಪಿ.ರುದ್ರೇಶ್, ಗಣೇಶ್ ಅಂಗಡಿ, ವಿನೋದ್‌ಕುಮಾರ್, ಜಿ.ವಿ.ಕಿರಣ್‌ಕುಮಾರ್, ಸಿ.ಎ.ಶರತ್, ಎನ್.ಪಿ.ಶಂಕರ್, ಡಾ. ಲಕ್ಷ್ಮೀದೇವಿ ಗೋಪಿನಾಥ್, ಸಂಘದ ನಿರ್ದೇಶಕರು, ಪದಾಧಿಕಾರಿಗಳು, ಉದ್ಯಮಿಗಳು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *