ಶಿವಮೊಗ್ಗ: ಮಕ್ಕಳಿಗೆ ವಿದ್ಯಾಭ್ಯಾಸದ ಜತೆ ಸಂಸ್ಕಾರ ಹಾಗೂ ಉತ್ತಮ ಜೀವನ ರೂಪಿಸಿಕೊಳ್ಳಲು ಅವಶ್ಯವಿರುವ ಮೌಲ್ಯಗಳನ್ನು ಕಲಿಸಬೇಕು ಎಂದು ಗಾಯತ್ರಿ ವಿದ್ಯಾಲಯದ ಅಧ್ಯಕ್ಷ ಎಚ್.ಮಾಣೇಶ್ವರ್ ಶೇಠ್ ಹೇಳಿದರು.
ನಗರದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ಹಮ್ಮಿಕೊಳ್ಳಲಾದ ಪ್ರತಿಭಾ ಪುರಸ್ಕಾರ ಹಾಗೂ ಇಂಟರ್ಯಾಕ್ಟ್ ಕ್ಲಬ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ವೃತ್ತಿ ಜೀವನಕ್ಕೆ ಅವಶ್ಯವಿರುವ ಕೌಶಲ್ಯಗಳನ್ನು ಹಂತ ಹಂತವಾಗಿ ಕಲಿಸಬೇಕು. ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲೂ ಮಕ್ಕಳು ಹೆಚ್ಚು ತೊಡಗಿಸಿಕೊಳ್ಳಬೇಕು. ಆಗ ಪರಿಪೂರ್ಣ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೋಟರಿ ಮಾಜಿ ಸಹಾಯಕ ಗವರ್ನರ್ ಚಂದ್ರಹಾಸ ಪಿ.ರಾಯ್ಕರ್ ಅವರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಅಭಿನಂದಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳುವ ದೃಷ್ಟಿಯಿಂದ ಇಂಟರ್ಯಾಕ್ಟ್ ಕ್ಲಬ್ ಸಹಕಾರಿಯಾಗುತ್ತದೆ. ಮನೆ ಹಾಗೂ ಶಾಲೆಯಲ್ಲಿ ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ನೀಡುವ ಕೆಲಸ ಆಗಬೇಕು ಎಂದು ಹೇಳಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಇಂಟರ್ಯಾಕ್ಟ್ ಕ್ಲಬ್ ಮೂಲಕ ಮಕ್ಕಳಿಗೆ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವುದು ವಿಷಯ ಕುರಿತು ತರಬೇತಿ ಶಿಬಿರ ನಡೆಸಲಾಗುವುದು. ಉಚಿತ ಆರೋಗ್ಯ ತಪಾಸಣೆ ಹಾಗೂ ಪ್ರಬಂಧ ಸ್ಪರ್ಧೆ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದ ಸದೃಢ ಪ್ರಜೆಗಳಾಗಬೇಕು. ಶಿಕ್ಷಣದ ಜತೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸೇವಾ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಂಟರ್ಯಾಕ್ಟ್ ಕ್ಲಬ್ ಚೇರ್ಮನ್ ಶೇಷಗಿರಿ ಮಾತನಾಡಿ, ಇಂಟರ್ಯಾಕ್ಟ್ ನಲ್ಲಿ ಮಕ್ಕಳು ತೊಡಗಿಸಿಕೊಳ್ಳುವಿಕೆ ಕುರಿತು ವಿವರಿಸಿದರು. ನೂತನ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷರಾಗಿ ಮನೀಶಾ, ಕಾರ್ಯದರ್ಶಿ ಧನುಷ್ ತಂಡದವರು ಅಧಿಕಾರ ವಹಿಸಿಕೊಂಡರು. ಗಾಯತ್ರಿ ವಿದ್ಯಾಲಯದ ಉಪಾಧ್ಯಕ್ಷ ಗೋಪಾಲ್ ಎನ್.ಶೇಠ್, ಕಾರ್ಯದರ್ಶಿ ಗಣಪತಿ ಶೇಠ್ ಉಪಸ್ಥಿತರಿದ್ದರು.