ಶಿವಮೊಗ್ಗ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿನ ಪ್ರತಿಭೆ ಅನಾವರಣಗೊಳ್ಳಲು ಶಾಲೆಯ ವಾತಾವರಣ ಹಾಗೂ ಪಾಲಕರ ಸಹಕಾರ ಅಗತ್ಯ ಎಂದು ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಹಾಗೂ ರೋಟರಿ ಪೂರ್ವ ಇಂಗ್ಲೀಷ್ ಹೈಸ್ಕೂಲ್ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಕ್ಕಳು ವಿದ್ಯಾಭ್ಯಾಸದ ಜತೆಗೆ ಜ್ಞಾನ ವೃದ್ಧಿಸುವ ಹಾಗೂ ಸಮಾಜಮುಖಿಯಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗುವ ಇಂಟರ‍್ಯಾಕ್ಟ್ ಕ್ಲಬ್ ಸೇರಿಕೊಂಡು ಸರ್ವತೋಮುಖ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಅರುಣ್ ದೀಕ್ಷಿತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆಯಲ್ಲಿ ಸಂಸ್ಕಾರ, ಗುರುಹಿರಿಯರು, ಶಿಕ್ಷಕರಿಗೆ ಗೌರವ ನೀಡುವ ಮನೋಭಾವ ಬೆಳೆಸಬೇಕು. ಸಾಮಜಿಕ ವಿಷಯಗಳ ಬಗ್ಗೆ ಹಂತ ಹಂತವಾಗಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಪ್ರೌಢಶಾಲೆ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಬ್ಧಕೋಶ, ನೋಟ್ ಪುಸ್ತಕ ನೀಡಿ ಗೌರವಿಸಿದರು. ರೋಟರಿ ಇಂಟರ‍್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷ ಎನ್.ಕುಮಾರ್, ಕಾರ್ಯದರ್ಶಿ ಗೌತಮಿ ಅಧಿಕಾರ ವಹಿಸಿಕೊಂಡರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಕಾರ್ಯದರ್ಶಿ ಶಶಿಕಾಂತ್ ನಾಡಿಗ್ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಸಾಂಸ್ಕೃತಿಕ ಹಾಗೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ರೋಟರಿ ಇಂಟರ‍್ಯಾಕ್ಟ್ ಎಲ್ಲ ಕ್ಲಬ್‌ಗಳಿಗೂ ಮಾದರಿಯಾಗಬೇಕು ಎಂದು ತಿಳಿಸಿದರು.
ಮ್ಯಾನೇಜಿಂಗ್ ಟ್ರಸ್ಟಿ ಡಾ. ಪರಮೇಶ್ವರ್ ಶಿಗ್ಗಾವ್ ಮಾತನಾಡಿ, 12-18ರ ವರ್ಷದೊಳಗಿನ ಮಕ್ಕಳಿಗೆ ಇಂಟರ‍್ಯಾಕ್ಟ್ ಕ್ಲಬ್ ಸ್ಥಾಪನೆಯಾಗಿದ್ದು, ಕ್ಲಬ್‌ಗಳ ಮುಖಾಂತರ ಬೇರೆ ಬೇರೆ ದೇಶದಲ್ಲಿರುವ ಮಕ್ಕಳ ಜತೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಜ್ಞಾನ ವೃದ್ಧಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಪ್ರಭಾರಿ ಕಾರ್ಯದರ್ಶಿ ಎಸ್.ಆರ್.ನಾಗವೇಣಿ, ಪ್ರಭಾರಿ ಪ್ರಾಚಾರ್ಯ ಬಿ.ಎಸ್.ಕಾವ್ಯಾ, ಹರ್ಷಿತಾ, ಅನನ್ಯ ಹೆಬ್ಬಾರ್, ಗಣೇಶ್ ಕೋಟ್ಯಾನ್, ಇನ್ನರ್‌ವ್ಹೀಲ್ ಮಾಜಿ ಅಧ್ಯಕೆ ಬಿಂದು ವಿಜಯಕುಮಾರ್ ಉಪಸ್ಥಿತರಿದ್ದರು.