ಯಾವುದೇ ಪ್ರಚಾರ ಇಲ್ಲದೆ ಹೆಚ್ಚು ಮತ ಗಳಿಸಿದ ಕಡಿದಾಳ ಗೋಪಾಲರಿಗೆ ಶ್ರೀನಿಧಿ ಎಜುಕೇಶನ್ ಟ್ರಸ್ಟ್ ಹಾಗೂ ಸಹ್ಯಾದ್ರಿ ಪ್ರೌಢಶಾಲೆಯ ಶಿಕ್ಷಕರ ವತಿಯಿಂದ ಹಾಗೂ ಇಂಟರ್ ಆಕ್ಟ್ ಕ್ಲಬ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಹತ್ತು ವರ್ಷಗಳ ನಂತರ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ನೆಡದ ಚುನಾವಣೆಯಲ್ಲಿ ಕಡಿದಾಳ್ ಗೋಪಾಲರ ಸಿಂಡಿಕೇಟಿಗೆ ಬಹುಮತ ಲಭಿಸಿ ಎಲ್ಲರೂ ಆಯ್ಕೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಡಾ. ಕಡಿದಾಳ ಗೋಪಾಲ್ ಮಾತನಾಡಿ, ಜನರು ನಮ್ಮ ತಂಡದ ಮೇಲೆ ಇಟ್ಟ ಭರವಸೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಹಾಗೂ ಬರುವ ದಿನಗಳಲ್ಲಿ ಪ್ರಾಮಾಣಿಕವಾಗಿ ಸಂಘದ ಸೇವೆ ಮಾಡುತ್ತಾ ಸಂಘವನ್ನು ಇನ್ನೂ ಅತಿ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ನುಡಿದರು.
ಈ ವೇಳೆ ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಡಾ. ಕಡಿದಾಳ್ ಗೋಪಾಲ್ ಅವರು ರೋಟರಿಯ ಮಹಾದಾನಿ. ಅವರು ಹಲವಾರು ಸಂಘಟನೆಗಳಲ್ಲಿ ಸಮಾಜಮುಖಿಯಾಗಿ ದೊಡ್ಡ ಮಟ್ಟದ ಸೇವೆಯನ್ನು ಸಲ್ಲಿಸಿರುವುದು ಶ್ಲಾಘನೀಯ ಎಂದು ನುಡಿದರು.
ಸಮಾರಂಭದಲ್ಲಿ ಟ್ರಸ್ಟಿನ ನಿರ್ದೇಶಕ ಕೋಳಿಗೆ ವಾಸಪ್ಪ ಗೌಡ, ಶಿವಮೊಗ್ಗ ಜಿಲ್ಲೆಯ ವಾಣಿಜ್ಯ ಮತ್ತು ರೋಟರಿ ಅಧ್ಯಕ್ಷ ಅರುಣ್ ದೀಕ್ಷಿತ್, ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಸಲ್ಮಾ, ಶಶಿಗಿರಿಗೌಡ, ಡಾ. ಧನಂಜಯ ರಾಂಪುರ ಉಪಸ್ಥಿತರಿದ್ದರು.