ಮಹಾತ್ಮ ಗಾಂಧೀಜಿ ವಿಚಾರಧಾರೆಯನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳದೇ ಇರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಕುವೆಂಪು ವಿಶ್ವವಿದ್ಯಾಲಯ ಮತ್ತು ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಆಶ್ರಯದಲ್ಲಿ ಕಾಲೇಜಿನ ಚಂದನ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಗಾಂಧಿ ತತ್ವ ಪ್ರಣೀತ ಯುವಜನ ಶಿಬಿರದಲ್ಲಿ ಮಾತನಾಡಿದರು.
ಗಾಂಧೀಜಿ ತತ್ವಗಳನ್ನು ಎಲ್ಲರೂ ಅವರ ಅನುಕೂಲಕ್ಕೆ ತಕ್ಕಂತೆ ಕೇಳುತ್ತಿದ್ದಾರೆ. ಇಂತಹ ಮನಃಸ್ಥಿತಿ ಬದಲಾವಣೆ ಆಗುವ ಅಗತ್ಯವಿದೆ. ಈ ಮೂಲಕ ಸದೃಢ ಸಮಾಜ ಕಟ್ಟಲು ಸಾಧ್ಯ.ವಾಗುತ್ತದೆ. ವಿಶೇಷವಾಗಿ ಯುವ ಜನತೆ ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.
ಜಗತ್ತು ಬದಲಾಯಿಸಬೇಕೆಂಬ ಹಂಬಲ ಗಾಂಧೀಜಿ ಅವರಲ್ಲಿತ್ತು. ಗಾಂಧೀಜಿ ಅವರ ಜೀವನ ಪ್ರಯೋಗಶೀಲತೆಯಿಂದ ಕೂಡಿತ್ತು. ಅಂದರೆ ಅದು ತಪ್ಪಾಗುವುದಿಲ್ಲ ಎಂದರು.
ಯುವಜನತೆ ಗಾಂಧೀಜಿಯ ತತ್ವ ಆದರ್ಶಗಳನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ. ಎಲ್ಲರೂ ಸತ್ಯದ ಕಡೆಗೆ ನಡೆಯಬೇಕು ಆಗ ಮಾತ್ರ ಬದಲಾವಣೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಗಾಂಧೀಜಿ ಜೀವನದ ಆದರ್ಶಗಳನ್ನು ಜನರು ಸರಿಯಾಗಿ ಗ್ರಹಿಸಬೇಕು. ಇದರಿಂದ ತುಂಬಾ ಅನುಕೂಲವಾಗುತ್ತದೆ. ಹೊಸ ಬದಲಾವಣೆಗೂ ಮುನ್ನುಡಿ ಬರೆಯಬಹುದು ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಸರ್ವ ಕಾಲಕ್ಕೂ ಗಾಂಧೀಜಿ ಅವರ ಜೀವನದ ಪ್ರಮುಖ ತತ್ವ ಆದರ್ಶಗಳು ಪ್ರಸ್ತುತ ಆಗಿರುತ್ತವೆ ಎಂದು ತಿಳಿಸಿದರು.
ಎಂ.ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದ ಕಾರ್ಯಕ್ರಮ ಸಂಯೋಜನಾಧಿಕಾರಿ ಶುಭಾ ಮರವಂತೆ, ಶಿಬಿರದ ಸಂಚಾಲಕ ಪ್ರೊ. ಕೆ.ಎಂ.ನಾಗರಾಜ ಇತರರಿದ್ದರು