ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಾರ್ಯಗಳು ದೀರ್ಘಕಾಲ ಉಳಿಯಲು ಹಾಗೂ ಸಾರ್ವಜನಿಕರ ಅನುಕೂಲಕ್ಕೆ ಬರಲು ಸಾರ್ವಜನಿಕರ ಸಹಕಾರ ಮುಖ್ಯ, ಅವರ ಜವಾಬ್ದಾರಿ ಹೆಚ್ಚಿರುತ್ತದೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಇಂಜಿನಿಯರ್ ವಿಜಯಕುಮಾರ್ ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಕಾಪಾಡಿಕೊಳ್ಳಬೇಕು. ಸ್ಮಾರ್ಟ್ ಸಿಟಿಯಲ್ಲಿ ಈಗಾಗಲೇ 930 ಕೋಟಿ ರೂ. ಕಾಮಗಾರಿ ನಡೆದಿದ್ದು, ರಿಪೇರಿ ಕಾರ್ಯಕ್ಕೆ ಇನ್ನು 70 ಕೋಟಿ ರೂ. ಹಣವನ್ನು ಮೀಸಲು ಹಣವಾಗಿ ಇಡಲಾಗಿದೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿಯ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿದ್ದು, ವಿವಿಧ ಇಲಾಖೆ ಹಾಗೂ ಮಹಾನಗರ ಪಾಲಿಕೆಗೆ ಹಸ್ತಾಂತರಿಸುವುದು ಬಾಕಿ ಉಳಿದಿರುತ್ತದೆ. ಪೂರ್ಣಗೊಂಡ ಕಾಮಗಾರಿಗಳನ್ನು ಹಸ್ತಾಂತರಿಸುವಂತೆ ರಾಜ್ಯ ಸರ್ಕಾರದ ಕಾರ್ಯದರ್ಶಿ ನಿರ್ದೇಶನ ನೀಡಿರುತ್ತಾರೆ ಎಂದರು.
ಸ್ಮಾರ್ಟ್ ಸಿಟಿಯ ಎಲ್ಲ ಕಾಮಗಾರಿಗಳನ್ನು, ಪತ್ರ ವ್ಯವಹಾರಗಳನ್ನು ಹಸ್ತಾಂತರಿಸಿಕೊಳ್ಳಲು ಕ್ರಮ ವಹಿಸಲಾಗುತ್ತದೆ. ನಿರ್ವಹಣೆಯ ಮೊತ್ತವನ್ನು ತೆಗೆದುಕೊಂಡು ರಸ್ತೆ ಪಾರ್ಕ್ ಇತ್ಯಾದಿಗಳ ನಿರ್ವಹಣೆಯನ್ನು ಪ್ರಾರಂಭಿಸಬೇಕಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ವತಿಯಿಂದ ಸ್ಮಾರ್ಟ್ ಸಿಟಿಯಲ್ಲಿ ಆಗಬೇಕಿರುವ ಬಾಕಿ ಸಣ್ಣಪುಟ್ಟ ಕೆಲಸಗಳು ರಿಪೇರಿ ಕಾರ್ಯಗಳನ್ನು ಬೇಗ ಮಾಡಿ ಮುಗಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ಸ್ಮಾರ್ಟ್ ಸಿಟಿಯಿಂದ ಶಿವಮೊಗ್ಗ ನಗರ ಸಾಕಷ್ಟು ಅಭಿವೃದ್ಧಿ ಹೊಂದುವುದರ ಜತೆಗೆ ತುಂಬಾ ಸುಂದರವಾಗಿ ಕಾಣುತ್ತಿದೆ. ಇನ್ನು ಆಗಬೇಕಿರುವ ಕೆಲಸದ ಕಡೆ ಗಮನ ವಹಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರೋಟರಿ ಸದಸ್ಯರ ಹಲವಾರು ಪ್ರಶ್ನೆಗಳಿಗೆ ಸ್ಮಾರ್ಟ್ ಸಿಟಿ ಇಂಜಿನಿಯರ್ ವಿಜಯ್ ಕುಮಾರ್ ಉತ್ತರಿಸಿದರು. ಯಾವುದೇ ಸರ್ಕಾರ ಯೋಜನೆಗಳು ಫಲಪ್ರದವಾಗಲು ಸಾರ್ವಜನಿಕರ ಸಹಕಾರ ಬೇಕು. ಸ್ಮಾರ್ಟ್ ಸಿಟಿಯಿಂದ ಶಿವಮೊಗ್ಗ ಚಿತ್ರಣವೇ ಬದಲಾಗಿದೆ ಎಂದು ನುಡಿದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಸಂತ್ ಹೋಬಳಿದಾರ್, ಬಿಂದು ವಿಜಯಕುಮಾರ್, ಮಂಜುನಾಥ್‌ರಾವ್ ಕದಂ, ಚಂದ್ರಹಾಸ್ ಪಿ.ರಾಯ್ಕರ್, ಡಾ. ಅರುಣ್, ಡಾ. ಧನಂಜಯ, ಕೆ.ಜಿ.ರಾಮಚಂದ್ರರಾವ್, ಗಣೇಶ್, ಸಹಾಯಕ ಗವರ್ನರ್ ಎಸ್.ಆರ್.ನಾಗರಾಜ್, ಹೊಸತೋಟ ಸೂರ್ಯನಾರಾಯಣ್, ರವೀಂದ್ರನಾಥ್ ಐತಾಳ್, ಕಿಶೋರ್‌ಕುಮಾರ್, ಡಾ. ಎಚ್.ಎಸ್. ನಾಗಭೂಷಣ್, ಕಾಂತೇಶ್ ಕದರಮಂಡಲಗಿ, ಶ್ರೀನಿವಾಸ್ ಗೌಡ, ಮಂಜುನಾಥ್, ಕೃಷ್ಣಮೂರ್ತಿ, ಗೀತಾ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.