ಸ್ಟಾರ್ಟ್ ಅಪ್ ಉದ್ದಿಮೆದಾರರಿಗೆ ಆಶಾಕಿರಣ ‘ಅನ್ವೇಷಣ’

ಮಲೆನಾಡು ಭಾಗದಲ್ಲಿ ಹೊಸ ಸ್ಟಾರ್ಟ್ ಅಪ್ ಗಳು ಆರಂಭವಾಗಲು ಉತ್ತಮ ಅವಕಾಶವಿದ್ದು ನಾವೀನ್ಯತೆ ಹೊಂದಿರುವ ಉದ್ಯಮ ಚಿಂತನೆಗಳು ಕಾರ್ಯರೂಪಕ್ಕೆ ಬರಬೇಕು. ಬೆಂಗಳೂರಿನಂತೆಯೇ ಮಲೆನಾಡು ಭಾಗವೂ ಕೂಡ ಹೂಡಿಕೆದಾರರನ್ನು ಆಕರ್ಷಿಸಿ ಇಲ್ಲಿನ ಪ್ರತಿಭಾವಂತರನ್ನು ಉದ್ಯಮಿಗಳನ್ನಾಗಿಸಲು ಬೇಕಾದ ವೇದಿಕೆಯನ್ನು ಒದಗಿಸುತ್ತಿದ್ದೇವೆ ಎಂದು ಅನ್ವೇಷಣ ಟೆಕ್ನಾಲಜಿ ಬಿಸಿನೆಸ್ ಇನಕ್ಯುಬೇಟರ್ ನ ಮುಖ್ಯಸ್ಥರಾದ ಶ್ರೀ ಹರೀಶ್ ಗದಗಿನ್ ರವರು ಹೇಳಿದರು. ಶುಕ್ರವಾರ ನಡೆದ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಇದರ ವಾರದ ಸಭೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹರೀಶ್ ರವರು ಕ್ರಿಯಾಶೀಲ ನವ ಉದ್ಯಮಿಗಳಿಗೆ ಅವಶ್ಯಕವಿರುವ ತರಬೇತಿ, ಹೂಡಿಕೆದಾರರು, ಮಾರುಕಟ್ಟೆ, ಮುಂತಾದ ವಿಷಯಗಳನ್ನು ಒದಗಿಸುವಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಅನ್ವೇಷಣ ಸಂಸ್ಥೆ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು. ತಮ್ಮ ಸಂಸ್ಥೆಯ ಮೂಲಕ ಯುವ ಸೃಷ್ಟಿ, ದಿಕ್ಸೂಚಿ, ವೃದ್ಧಿ ಹಾಗೂ ವೇಗ ಎಂಬ ವಿವಿಧ ಕಾರ್ಯಯೋಜನೆಗಳ ಮೂಲಕ ಸ್ಟಾರ್ಟ್ ಅಪ್ ಉದ್ದಿಮೆದಾರರಿಗೆ ಅಗತ್ಯ ಸೇವೆ ಕಲ್ಪಿಸಿ ಯುವಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿಯೇ ಯುವ ಜನರಿಗೆ ಉದ್ಯಮಶೀಲತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಿ ಈಗಾಗಲೇ ಮಲೆನಾಡು ಭಾಗದ 8000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ತಲುಪಿರುವುದಾಗಿಯೂ ತಿಳಿಸಿದರು. ಕಾಕುಡ್ ಎಂಬ ಸ್ಟಾರ್ಟ್ ಅಪ್ ಸಂಸ್ಥಾಪಕರಾದ ಶ್ರೀ ವಿನಯ್ ರವರು ಮಾತನಾಡಿ ಅನ್ವೇಷಣದ ಮಾರ್ಗದರ್ಶನದಿಂದ ತಮ್ಮ ಉದ್ದಿಮೆಯ ಬೆಳವಣಿಗೆಗೆ ಆದ ಉಪಯೋಗಗಳ ಬಗ್ಗೆ ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಇದರ ಅಧ್ಯಕ್ಷರಾದ ರೊ,ಮುಸ್ತಾಕ್ ಅಲಿಶಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿವಮೊಗ್ಗದಂತಹ ನಗರದಲ್ಲಿ ವಾಣಿಜ್ಯೋದ್ಯಮಕ್ಕೆ ಬೇಕಾಗಿರುವ ಹೊಸ ಆಯಾಮವನ್ನು ನೀಡುವಲ್ಲಿ ಶ್ರಮಿಸುತ್ತಿರುವ ಅನ್ವೇಷಣ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಕ್ಲಬ್ ನ ಕಾರ್ಯದರ್ಶಿ ರೊ.ಶ್ರೀಕಾಂತ್ ಎ.ವಿ., ಸಹ ಕಾರ್ಯದರ್ಶಿ ರೊ.ಡಾ.ಸಿದ್ಧಲಿಂಗ ಮೂರ್ತಿ, ವಲಯ ಸೇನಾನಿ ರೊ.ಮಂಜುಳಾ ರಾಜು, ಅನ್ವೇಷಣ ಸಂಸ್ಥೆಯ ಇನ್ ಕ್ಯುಬೇಶನ್ ಮ್ಯಾನೇಜರ್ ಶ್ರೀ ಭರತ್ ಹಾಗೂ ಕ್ಲಬ್ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕ್ಲಬ್ ವತಿಯಿಂದ ಶ್ರೀ ಹರೀಶ್ ಗದಗಿನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *