ಶಿವಮೊಗ್ಗ: ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆಯಾಗಿದ್ದು, ಪರಿಸರದ ರಕ್ಷಣೆಗಾಗಿ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದು ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯ ಯೋಗಶಿಕ್ಷಕ ಜಿ.ಎಸ್.ಓಂಕಾರ್ ಹೇಳಿದರು.
ನಗರದ ಶಿವಗಂಗಾ ಯೋಗಕೇಂದ್ರದ ರಾಘವ ಶಾಖೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡಕ್ಕೆ ನೀರೇರೆಯುವದರ ಮುಖಾಂತರ ಚಾಲನೆ ನೀಡಿ ಮಾತನಾಡಿ, ಪರಿಸರ ವಿನಾಶದಿಂದ ಮನುಕುಲವೇ ನಾಶವಾಗುತ್ತದೆ. ಪರಿಸರವನ್ನು ನಾವು ಆದಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದರು.
ಇಂದು ನೀರು ಸಾಕಷ್ಟು ಕಡೆ ಕಲುಷಿತವಾಗುತ್ತಿದೆ. ನೀರಿನ ದುರ್ಬಳಕೆ ಸಲ್ಲದು. ಪರಿಸರ ದಿನಾಚರಣೆ ಆ ದಿನಕ್ಕೆ ಸೀಮಿತವಾಗದೆ ಪ್ರತಿನಿತ್ಯ ಎಲ್ಲರ ಮನೆಗಳಲ್ಲೂ ಸಹ ಜನ್ಮದಿನ ಹಾಗೂ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ಗಿಡಗಳನ್ನು ನೆಡುವುದರ ಮುಖಾಂತರ ಪರಿಸರಕ್ಕೆ ಒಂದು ಸಣ್ಣ ಕೊಡುಗೆಯನ್ನು ನಾವು ನೀಡಬೇಕಾಗಿದೆ ಎಂದರು.
ಶಿಕ್ಷಕ ಹರೀಶ್ ಮಾತನಾಡಿ, ಇಂದು ಈ-ತ್ಯಾಜ್ಯ ವಸ್ತುವನ್ನು ಸರಿಯಾಗಿ ವಿಲೇವಾರಿ ಮಾಡದೇ ಇರುವುದರಿಂದ ಭೂಮಿ ಸಾಕಷ್ಟು ಹಾಳಾಗುತ್ತಿದೆ. ನಾವು ಮನೆಯಲ್ಲಿ ಬಳಸಿದ ಕಂಪ್ಯೂಟರ್ ಶೆಲ್ ಹಾಗೂ ಎಲೆಕ್ಟಾçನಿಕ್ ವಸ್ತುಗಳನ್ನ ಸರಿಯಾಗಿ ವಿಲೇವಾರಿ ಮಾಡಬೇಕು ಎಂದು ಹೇಳಿದರು.
ಪರಿಸರವನ್ನ ಸುಂದರವಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು. ನಗರೀಕರಣದಿಂದ ಮರ ಗಿಡಗಳ ನಾಶವಾಗುತ್ತಿದೆ. ನಾವು ಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಮರ ಗಿಡಗಳನ್ನು ಬೆಳೆಸುವುದರ ಮುಖಾಂತರ ಒಳ್ಳೆಯ ಆಮ್ಲಜನಕವನ್ನು ಪಡೆಯುವುದರ ಮುಖಾಂತರ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ. ಯಶ್ವಂತ್ ಮಾತನಾಡಿ, ಇಂದು ನಮ್ಮ ತುಂಗಾ ನದಿ ಸಾಕಷ್ಟು ಮಲಿನವಾಗುತ್ತಿದೆ. ಅದರಲ್ಲಿ ಸಿಲಿಕಾನ್ ಹೆಚ್ಚು ಹೆಚ್ಚು ತುಂಬಿ ನೀರು ಸಾಕಷ್ಟು ಕಲುಷಿತಗೊಳ್ಳುತ್ತಿದೆ. ಆದ್ದರಿಂದ ನಾವು ನದಿ ಪಾತ್ರವನ್ನು ಆದಷ್ಟು ಸ್ವಚ್ಚವಾಗಿಟ್ಟುಕೊಳ್ಳಬೇಕು. ಬೇಡವಾದ ಕಸವನ್ನು ನದಿಗೆ ಎಸೆಯುವುದರ ಮುಖಾಂತರ ನದಿಗಳನ್ನು ಹಾಳು ಮಾಡುತ್ತಿದ್ದೇವೆ. ನದಿಗಳು ನಮ್ಮ ಮೂಲ ಸಂಪತ್ತು. ಈ ನಿಟ್ಟಿನಲ್ಲಿ ನಾವು ನದಿಗಳನ್ನು ಕಾಪಾಡಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ನರಸೋಜಿ ರಾವ್, ಶ್ರೀನಿವಾಸ್, ರೋಟರಿ ಜಿ.ವಿಜಯ್ ಕುಮಾರ್, ಸತೀಶ್, ಅರುಣ್, ಮಹೇಶ್, ಗಾಯಿತ್ರಿ, ಶೋಭಾ, ಶೈಲಾ ವಿಕ್ರಂ, ಶಂಕರ್, ಶಶಿಧರ್, ಮಾಲತಿ, ಸುಮಾ,
ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು. ಇದರೊಂದಿಗೆ ಪರಿಸರ ಗೀತೆಗಳನ್ನು ಹಾಡಲಾಯಿತು.