ಶಿಕ್ಷಕ ವೃತ್ತಿಯಲ್ಲಿ ಯಶಸ್ಸು ಕಠಿಣ

ಶಿವಮೊಗ್ಗ: ಶಿಕ್ಷಕ ವೃತ್ತಿಯಲ್ಲಿ ಯಶಸ್ಸು ಕಾಣುವುದು ತುಂಬಾ ಕಠಿಣ ಕೆಲಸ ಶಾಸಕ ಎಸ್.ಎನ್.ಚನ್ನಬಸಪ್ಪ ಅಭಿಪ್ರಾಯಪಟ್ಟರು.
ನಗರದ ಎಟಿಎನ್‌ಸಿಸಿ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು, ಎನ್‌ಎಸ್‌ಎಸ್ ಘಟಕ, ರೇಂಜರ‍್ಸ್, ರೋವರ‍್ಸ್, ರೆಡ್‌ಕ್ರಾಸ್ ಘಟಕದ ವತಿಯಿಂದ ವಾಣಿಜ್ಯಶಾಸ್ತ್ರದ ಮುಖ್ಯಸ್ಥ, ಸಹ ಪ್ರಾಧ್ಯಾಪಕ ಪ್ರೊ. ಎಸ್.ಜಗದೀಶ್ ಅವರಿಗೆ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರದ ಪ್ರತಿಷ್ಠಿತ ಕಾಲೇಜು ಎಟಿಎನ್‌ಸಿಸಿಯಲ್ಲಿ ಕೆಲಸ ಮಾಡುವ ಅವಕಾಶ ಸಿಗುವುದು ಒಂದು ಭಾಗ್ಯ. ನಿವೃತ್ತಿ ಜೀವನವು ಸಮಾಜಮುಖಿಯಾಗಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ನಾವು ವೃತ್ತಿ ಅವಧಿಯಲ್ಲಿ ಮಾಡಿರುವ ಕಾರ್ಯಗಳಿಂದ ನಮ್ಮನ್ನು ಗುರುತಿಸಿದಾಗ ನಿವೃತ್ತಿ ಜೀವನ ಸಾರ್ಥಕವಾಗುತ್ತದೆ. ಪ್ರೊ. ಜಗದೀಶ್ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ಕೆ.ಎ.ವಿಷ್ಣುಮೂರ್ತಿ ಮಾತನಾಡಿ, 32 ವರ್ಷಗಳಿಂದ ಶಿಕ್ಷಕ ವೃತ್ತಿಯನ್ನು ಜಗದೀಶ್ ಅವರು ಉತ್ತಮವಾಗಿ ಸಲ್ಲಿಸಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಪ್ರೋತ್ಸಾಹಿಸಿದ್ದಾರೆ. ಎನ್‌ಎಸ್‌ಎಸ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿರುತ್ತಾರೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ. ಜಗದೀಶ್ ಮಾತನಾಡಿ, 32 ವರ್ಷಗಳಿಂದ ಸಲ್ಲಿಸಿದ ಸೇವೆಯು ತೃಪ್ತಿ ತಂದಿದೆ. ಆಡಳಿತ ಮಂಡಳಿ, ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಯಶಸ್ವಿಯಾಗಿ ಪೂರೈಸಿದ್ದೇನೆ ಎಂದರು.
ಪ್ರಾಚಾರ್ಯೆ ಪ್ರೊ. ಪಿ.ಆರ್.ಮಮತಾ, ಕುವೆಂಪು ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ, ಪ್ರೊ. ಎನ್.ಮಂಜುನಾಥ್, ನಿವೃತ್ತ ಪ್ರಾಚಾರ್ಯ ಎಚ್.ಎಂ.ಸುರೇಶ್, ಪ್ರೊ. ರವಿಶಂಕರ್, ರೋಟರಿ ಮಾಜಿ ಸಹಾಯಕ ಗೌರ್ನರ್ ಜಿ ವಿಜಯಕುಮಾರ್ ಸುಜಾತಾ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *