ಸುಗಮ ಸಂಗೀತ ಕ್ಷೇತ್ರಕ್ಕೆ ಡಾ. ಹೆಚ್ಎಸ್ ವಿ ಕೊಡುಗೆ ಅಪಾರ ಹೆಚ್.ಎಸ್.ವಿ ಅವರ ಗೀತೆಗಳ ಸ್ಪರ್ಧೆಯಲ್ಲಿ ಎನ್.ಗೋಪಿನಾಥ್ ಅಭಿಮತ

ಶಿವಮೊಗ್ಗ : ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಜನ ದಿಗ್ಗಜರು ಇದ್ದು ಅದರಲ್ಲಿ ಡಾಕ್ಟರ್ ಹೆಚ್.ಎಸ್ ವೆಂಕಟೇಶ್ ಮೂರ್ತಿ ಅವರ ಕೊಡುಗೆ ಅಪಾರ ಅವರ ಸಂಗೀತ ಸೇವೆ ಸಾಧನೆ ಇಂದಿಗೂ ಹಾಡುಗಾರರಿಗೆ ಸ್ಪೂರ್ತಿ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಗೋಪಿನಾಥ್ ಅಭಿಮತ ವ್ಯಕ್ತಪಡಿಸಿದರು.

ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಡಾ. ಹೆಚ್.ಎಸ್.ವೆಂಕಟೇಶ್ ಮೂರ್ತಿ ಅವರ 80ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ‘ಹಾಡ ಬನ್ನಿ ಗೀತೆಯ’ ಹೆಚ್.ಎಸ್.ವಿ ಅವರ ಗೀತೆಗಳ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮಕ್ಕಳಲ್ಲಿ ಸುಗಮ ಸಂಗೀತ ಆಸಕ್ತಿ ಕಡಿಮೆಯಾಗುತ್ತಿದೆ. ಮೊಬೈಲ್ ಫೇಸ್ ಬುಕ್ ಹಾಗೂ ಟಿವಿಗಳ ಹವ್ಯಾಸ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳು ಸಂಗೀತಾಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಸಂಗೀತಾಸಕ್ತಿ ಬೆಳೆಸಿಕೊಂಡಲ್ಲಿ ಮಕ್ಕಳ ಕಂಠ ಮಧುರವಾಗುವ ಜೊತೆಗೆ ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷೆ ಶಾಂತ ಶೆಟ್ಟಿ, ಹೆಚ್.ಎಸ್.ವಿ ಅವರು ಅನೇಕ ಚಲನಚಿತ್ರಗಳಿಗೆ ಸಾಹಿತ್ಯ ನೀಡಿ ಅಪಾರ ಜನ ಮೆಚ್ಚುಗೆ ಪಡೆದಿದ್ದಾರೆ. ಅದರಲ್ಲೂ ಚಿನ್ನಾರಿ ಮುತ್ತ ದಾಖಲೆ ಮಾಡಿ ವಿಶೇಷ ಗೌರವ ಸಂದಿದೆ. ಭಾವಗೀತೆ ಪ್ರಪಂಚದಲ್ಲಿ ಇವರ ಗೀತೆಗಳು ಇಂದಿಗೂ ಅವಿಸ್ಮರಣೀಯ ಎಂದ ಅವರು, ಸುಗಮ ಸಂಗೀತ ಅಭ್ಯಾಸ ಮಾಡಿದರೆ ಯಾವ ಗೀತೆಗಳನ್ನು ಸಹ ಸುಲಭವಾಗಿ ಹಾಡಬಹುದು ಎಂದರು.

ಮತ್ತೋರ್ವ ಹಿರಿಯ ಕಲಾವಿದ ಭದ್ರಾವತಿ ವಾಸು ಮಾತನಾಡಿ, ಸುಗಮ ಸಂಗೀತ ತಾಯಿಬೇರು, ಸಂಗೀತ ಸಾಧಕನ ಸ್ವತ್ತು. ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಸಂಗೀತ ಒಲಿಯುತ್ತದೆ ಎಂದರು.

ಕಾರ್ಯದರ್ಶಿ ಮಂಜುನಾಥ್ ಸ್ಪರ್ಧೆಯ ನಿಯಮಗಳನ್ನು ತಿಳಿಸಿದರು. ವೇದಿಕೆಯಲ್ಲಿ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾ ಖಜಾಂಚಿ ಜಿ.ವಿಜಯಕುಮಾರ್, ಸಂಚಾಲಕರಾದ ಶೋಭಾ ಸತೀಶ್, ಮಥುರಾ ನಾಗರಾಜ್, ಸುಶೀಲ.ಜಿ, ತೀರ್ಪುಗಾರರಾದ ದಿನೇಶ್, ದನ್ ಪಾಲ್ ಸಿಂಗ್, ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಐವತ್ತಕ್ಕೂ ಹೆಚ್ಚು ಸ್ಪರ್ದಾಳುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *