ಶಿವಮೊಗ್ಗ: ಚಾರಣ ಸಾಹಸದ ಕಾರ್ಯ ಅಗಿದ್ದು, ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಪ್ರತಿಯೊಬ್ಬರಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿವಮೊಗ್ಗ ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್ ಹೇಳಿದರು.
ಯೂತ್ ಹಾಸ್ಟೆಲ್ ತರುಣೋದಯ ಘಟಕ, ಕ್ರೀಡಾ ಭಾರತಿ, ಯೋಗ ಶಿಕ್ಷಣ ಕೇಂದ್ರದ ವತಿಯಿಂದ ಮಧುಕೃಪಾದಲ್ಲಿ ಆಯೋಜಿಸಿದ್ದ ಯೋಗಪಟುಗಳ ಹಿಮಾಲಯ ಚಾರಣ ಬಿಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದರು.
ಪಾರಂಪರಿಕ ಗ್ರಾಮೀಣ ಕ್ರಿಡೆಗಳನ್ನು ಉತ್ತೇಜಿಸುವ ಸಲುವಾಗಿ ರಾಷ್ಟ್ರ ಮಟ್ಟದಲ್ಲಿ ಪ್ರಾರಂಭವಾದ ಸಂಸ್ಥೆ ಯುವಕರನ್ನು ಹುರಿದುಂಬಿಸಿ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಊರಿಗೂ, ಜಿಲ್ಲೆಗೂ, ರಾಜ್ಯಕ್ಕೂ, ರಾಷ್ಟ್ರಕ್ಕೂ ಹೆಸರು ತಂದಿದೆ. ಅಂತರಾಷ್ಟ್ರೀಯ ಕ್ರೀಡಾಪಟುಗಳನ್ನು ಹೊರ ಹೊಮ್ಮಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ ಎಂದು ತಿಳಿಸಿದರು.
ತರುಣೋದಯ ಘಟಕ ಚೇರ‍್ಮನ್ ಎಸ್.ವಾಗೇಶ್ ಮಾತನಾಡಿ, ಅದೃಷ್ಟವಂತರಿಗೆ ಮಾತ್ರ ಹಿಮಾಲಯ ಚಾರಣ ಮಾಡಲು ಅವಕಾಶ ದೊರಕುತ್ತದೆ. ಈ ಬಾರಿ ಯೋಗ ಪಟುಗಳಿಗೆ ಆಯೋಜಿಸಿದ್ದು, ಪ್ರತಿ ವರ್ಷ ಯೂತ್ ಹಾಸ್ಟೆಲ್ಸ್ ವತಿಯಿಂದ ನೂರಾರು ಸಾಹಸಿಗಳಿಗೆ ಹಿಮಾಲಯ ಚಾರಣ ಏರ್ಪಡಿಸಿ ಅ.ನಾ.ವಿಜಯೇಂದ್ರ ರಾವ್, ಜಿ.ವಿಜಯಕುಮಾರ್ ಮನೆ ಮಾತಾಗಿದ್ದಾರೆ ಎಂದು ತಿಳಿಸಿದರು. ನಂತರ ಚಾರಣದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಯಶಸ್ಸಿಗೆ ಟಿಪ್ಸ್ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕ್ರೀಡಾ ಭಾರತೀಯ ಜಿಲ್ಲಾಧ್ಯಕ್ಷ ಡಾ. ನಾಗರಾಜ್ ಮಾತನಾಡಿ, ಚಾರಣದಲ್ಲಿ ದಿನನಿತ್ಯ ತೆಗೆದುಕೊಳ್ಳುವ ಔಷದಿ ಮರೆಯದೆ ತೆಗೆದುಕೊಂಡು ಹೋಗಬೇಕು. ಚಾರಣದಲ್ಲಿ ನಿರ್ಲಕ್ಷ್ಯ ಸಲ್ಲದು ಎಂದರು.
ಪವಿತ್ರಾ, ಅ.ನಾ.ವಿಜಯೇಂದ್ರ, ಕ್ರೀಡಾಭಾರತಿ ಶಿವಮೊಗ್ಗ ವಿಭಾಗ ಸಂಯೋಜಕ ರಾಘವೇಂದ್ರ, ಯೋಗ ಶಿಕ್ಷಣ ಸಮಿತಿ ಸದಸ್ಯ ರವೀಂದ್ರ, ರಮೇಶ್, ಯೂತ್ ಹಾಸ್ಟೆಲ್ ಅಸೋಸಿಯೇಷನ್ ರಾಜ್ಯ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್, ಜಿಲ್ಲಾ ಕಾರ್ಯದರ್ಶಿ ನಾಗಭೂಷಣ್, ರಾಷ್ಟ್ರೀಯ ಸ್ವಯಂಸೇವಕ ಸಂಘಧ ಶಿವಮೊಗ್ಗ ಜಿಲ್ಲಾ ಕಾರ್ಯವಾಹ ಚೇತನ್ ಇದ್ದರು.